ಗಾಂಧಿ ಮತ್ತು ವಿಚಾರ ವಿಮರ್ಶೆಯಲ್ಲಿ ಗಾಂಧಿವಾದ
ಗಾಂಧಿಯ ಜೀವನವೇ ಒಂದು ತಪಸ್ಸು. ರೂಪ ಮತ್ತು ಅನುಭವದಲ್ಲಿ ಸತ್ಯದ ನಿಷ್ಕರ್ಷೆ ಅಗತ್ಯ. ಗಾಂಧೀಜಿಯವರು ಸಾಮಾನ್ಯ ಮನುಷ್ಯನಾಗಿದ್ದು, ಪ್ರಯೋಗಾತ್ಮಕ ಬದುಕನ್ನು ರೂಪಿಸುವ ಮೂಲಕ ಸಾಧಕರಾದರು. ಅಪರಿಪೂರ್ಣ ಶರೀರದಲ್ಲಿ ಸತ್ಯ ಶೋಧನೆಯ ಪ್ರಯೋಗ ಕ್ಲಿಷ್ಟಕರವಾದುದು. ಆದರೆ ಸಮಾಜವನ್ನು ಶೋಧನೆಗೆ ಒಳಪಡಿಸಿದಾಗ ರೂಪ ಮತ್ತು ಅನುಭವಗಳ ಪ್ರಯೋಗಾತ್ಮಕ ಸಾರವೇ ಶುದ್ಧ ಜನಾಭಿಪ್ರಾಯ. ಈ ಅಭಿಪ್ರಾಯಕ್ಕೆ ಮೂಲ ಗಾಂಧೀಯು ಬಿತ್ತರಿಸಿದ ಮೌಲ್ಯಗಳು. ಮೌಲ್ಯ ಪ್ರೇರಿತ ಅನುಭವಾತ್ಮಕ ಅಭಿಪ್ರಾಯ ಅದು ಭಾರತೀಯ ಇತಿಹಾಸ ಮತ್ತು ಪುರಾಣಗ್ರಂಥಗಳ ಸತ್ವ. ಅದು ಇಲ್ಲಿನ ಜೀವನದ ರಸ-ವಿರಸಗಳ ಪರಿಧಿ. ಈ ಮೌಲ್ಯದ ಸ್ಪರ್ಶಜ್ಞಾನ ತುಂಬಿದ ಉತ್ಸಾಹದ ಮಾತುಗಳು ಇಡೀ ಭಾರತವನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಅಣಿಗೊಳಿಸಿದ ರೀತಿ ವಿಭಿನ್ನವಾದುದು. ಲಕ್ಷಾಂತರ ದೇಶಪ್ರೇಮ ಹೊತ್ತ ಹೃದಯಗಳು ಗಾಂಧೀ ಕರೆಗೆ ಸ್ಪಂದಿಸಿತು. ಈ ಮೂಲಕ ಅವರು ಅರಿತಿದ್ದ ಆದರ್ಶಗಳನ್ನು ಲಿಂಗಭೇದವಿಲ್ಲದೆ ಎಲ್ಲರೂ ಒಪ್ಪಿದರು. ತನ್ನ ಜೀವನ ಶೈಲಿಯಲ್ಲಿ ನಿರ್ಧಿಷ್ಟ ಭವಬಂಧನಗಳ ತೊಡಕನ್ನು ನಿವಾರಿಸಿ, ಹೊಸ ಜೀವನ ವಿಧಾನವನ್ನು ಅನ್ವೇಷಣೆ ಮಾಡಿದ ಮಹಾನ್ ಸಾಧಕ. ಜೊತೆಗೆ ಮನಸ್ಸನ್ನು ಕೃಷಿಮಾಡಿ ಜನರಲ್ಲಿ ವರ್ತ-ಭವಿತವ್ಯದ ಕನಸನ್ನು ಇತಿಹಾಸದ ನೆನಪೊಳು ತುಂಬಿದ ಋಷಿ.
ಗಾಂಧೀಜಿಯವರಿಗೆ ತಮ್ಮ ವೈಚಾರಿಕ ನಿಲುವಲ್ಲಿ ತುಂಬಾ ವಿಶ್ವಾಸವಿತ್ತು. ಈ ಕಾರಣದಿಂದಲೇ ಬದುಕನ್ನು ವ್ಯವಸ್ಥಿತ ಚೌಕಟ್ಟಿನೊಳಗೆ ರೂಢಿಸಿಕೊಳ್ಳುವ ಅವರ ಕ್ರಮ ತುಂಬಾ ಪರಿಣಾಮಕಾರಿಯಾದುದು. ಗಾಂಧೀಯನ್ನು ವಿಭಿನ್ನ ದೃಷ್ಟಿಕೋನದಿಂದ ಕಂಡವರು 'ತನ್ನ ಗಾಂಧೀ'ಯ ವೈರುಧ್ಯವನ್ನು ಬರವಣಿಗೆಯಿಂದ ವಿಶ್ಲೇಷಣೆ ಮಾಡತೊಡಗಿದರು. ಗಾಂಧಿಯನ್ನು ಒಂದು ವೈಚಾರಿಕವಾದದ ನೆಲೆಯಲ್ಲಿ ಅಧ್ಯನ ಮಾಡಿದವರೇ ಹೆಚ್ಚು. ಬಹುತೇಕ ಲೇಖಕರು,ಚಿಂತಕರು, ವಿಮರ್ಶಕರು ಅದು ದೆಶಿಯರೇ ಆಗಿರಲಿ, ಅಲ್ಲ ವಿದೇಶಿಯರೇ ಆಗಿರಲಿ ಗಾಂಧೀ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಅರ್ಥ ಹುಡುಕುವಲ್ಲಿ ವಿಫಲರಾಗುತ್ತೇವೆ.
ಗಾಂಧೀ ಎಂಬ ಸಾಮಾನ್ಯ ವ್ಯಕ್ತಿ ವಿಶ್ಲೇಷಣೆಗೊಳಪಟ್ಟಾಗ ಅವರ ವಿಚಾರಗಳನ್ನು ವಿಮರ್ಶೆಯ ವಸ್ತುವಾಗಿ ಸ್ವೀಕರಿಸಬಹುದು. ಈ ಮೂಲಕ ಅಂದಿನ ಪರಿಸರ ಮತ್ತು ಇಂದಿನ ಸನ್ನಿವೇಶಗಳ ಸಾಮಾಜಿಕ ತುಲನೆಯಿಂದ ಗಾಂಧಿಯನ್ನು ಅರ್ಥೈಸಿಕೊಳ್ಳಬಹುದು. ಅಷ್ಟು ಮಾತ್ರವಲ್ಲ ರಾಜಕೀಯ, ಸಾಂಸ್ಕೃತಿಕ ಹಾಗು ಆರ್ಥಿಕತೆಯಲ್ಲೋ ಗಾಂಧಿಯನ್ನು ನಾವು ಕಾಣಬಹುದು. ಇದು ಗಾಂಧೀಯ ವಿಚಾರಧಾರೆಯು ಹಿಂದಿನಿಂದ ಸತ್ಸಂಪ್ರದಾಯವಾಗಿ ಬೆಳೆದು ನಿಂತ ವಿಚಾರಗಳ ಕವಲು ಎಂದು ಅರ್ಥೈಸಲು ಅನುಕೂಲವಾಗುತ್ತದೆ. ಗಾಂಧೀ ತನ್ನ ವೈಯಕ್ತಿಕ ಬದುಕಿನಲ್ಲಿ ಪರಿಚಯಿಸಿ ಸಾಮಾಜಿಕ ಪ್ರಯೋಗಕ್ಕೆ ಮುನ್ನುಡಿ ಹಾಕಿರುವುದು ಇಲ್ಲಿ ವಿಶೇಷ. ಕಾರ್ಯದಲ್ಲಿ ಅರ್ಚಕನ ನಿತ್ಯ ಪೂಜೆಯು ಚಮ್ಮಾರನ ನಿತ್ಯದ ಪ್ರಾಮಾಣಿಕ ಕರ್ತವಯಕೆ ಸಮವೆಂಬ ನಿಲುವು. ' ಗ್ರಾಮ ಸ್ವರಾಜ್ಯ ' ಬಗ್ಗೆ ಮಾತನಾಡುವಾಗ ಗಾಂಧೀ " ನಗರಗಳು ಗ್ರಾಮಗಳಿಂದಲೇ ಬದುಕುತ್ತಿವೆ, ಅದಕ್ಕಾಗಿ ನಗರವೇ ರಾಷ್ಟ್ರವಲ್ಲ. ಗ್ರಾಮಗಳ ಸಮೂಹವೇ ರಾಷ್ಟ್ರ. ನಾವು ಜಪಾನ್, ಅಮೇರಿಕ,ಇಂಗ್ಲೆಂಡಗಳಿಂದ ಆಮದು ಮಾಡಿಕೊಳ್ಳದೆ ನಮ್ಮ ದೇಶದ ಹಳ್ಳಿಯಲ್ಲೇ ಉತ್ಪಾದನೆ ಮಾಡಿಕೊಳ್ಳಬೇಕು." ಇದು ಗಾಂಧೀಯ ಭವಿಷ್ಯತ್ತಿನ ಆಗ್ರಹವಾಗಿತ್ತು. ಇವುಗಳು ಇತಿಹಾಸದಿಂದ ಗಾಂಧೀ ಅರ್ಥ ಮಾಡಿಕೊಂಡಿರುವ ವಿಚಾರ. ರಾಜಕೀಯ ಮತ್ತು ನ್ಯಾಯಿಕ ವಿಕೇಂದ್ರಿಕರಣವನ್ನು ಬಯಸುವ ಗಾಂಧೀಯ ಜನತಾ ನೋವಿಗೆ ಕಲ್ಯಾಣದ ಔಷದಿ ಹುಡುಕುವ ಪ್ರಯತ್ನವಾಗಿತ್ತು. ಗಾಂಧೀ ಒಂದು ವಾದ ಎನ್ನುವುದಕ್ಕಿಂತ ಗಾಂಧಿಯ ವಿಚಾರ ಮತ್ತು ಗಾಂಧಿಯ ಸ್ವ- ಸಾಮಾಜಿಕ ಪ್ರಯೋಗಗಳು ಒಂದು ಪರಿವರ್ತನೆಯನ್ನು ತಂದವು ಎನ್ನಬಹುದು. ಗಾಂಧಿ ಶಾಂತಿಯ ಹೊತ್ತ ಧೂತರ ಬದಲಾಗಿ ಪ್ರತಿಪಾದಕರಷ್ಟೇ. ನಾವು ಇನ್ನು ಗಾಂಧಿಯನ್ನು ಹೆಚ್ಚು ಹೆಚ್ಚು ಸ್ವೀಕರಿಸಿ ಅರ್ಥ ಹುಡುಕಬೇಕಾಗಿದೆ.
