ಅತಿರೇಕದ ಭಕ್ತಿ ಮನುಷ್ಯನನ್ನು ಅಹಂಕಾರಕ್ಕೆ ದೂಡುತ್ತದೆ ಜೊತೆಗೆ ಮದವೇರಿಸುತ್ತದೆ. ಹಲವು ಋಷಿಗಳನ್ನು ಕೋಪ ಮತ್ತು ಅಹಂಕಾರ ಸಾಧನೆಯ ನಂತರ ಆವರಿಸಿ ಸಾಧನೆಯನ್ನು ಶೂನ್ಯ ಮಾಡಿ ಮತ್ತೆ ತಪ್ಪಿನ ಅರಿವು ಮೂಡಿದ್ದು ಪೌರಾಣಿಕ ಹಾಗೂ ಐತಿಹಾಸಿಕ ಕಥೆಗಳಲ್ಲಿ ಓದಿದ್ದೇವೆ. ಇವತ್ತು ಏಕ ನಾಯಕತ್ವದಲ್ಲಿ ಉತ್ತಮ ಕಾರ್ಯವನ್ನು ಸಮರ್ಥಿಸುವ ಭರದಲ್ಲಿ ಕುರುಡ ವಿಚಾರಗಳನ್ನು ತುಂಬುವಷ್ಟು ಅಂಧರಾಗಿರುವವರು, ಅನಗತ್ಯವಾಗಿ ಲೆಕ್ಕಕ್ಕಿಂತ ಹೆಚ್ಚು ಪ್ರಚಾರ ಮಾಡಿ ಇತರರ ಮನೋಭಾವವನ್ನು ಹೀಯಾಳಿಸುವವರು ನಿಜಕ್ಕೂ ದೇಶದ ಪ್ರಧಾನಿ ಹಾಗೂ ಸಂವಿಧಾನಕ್ಕೆ ಅಪಚಾರ. ಅಲ್ಲದೇ ಇವರಿಗೆ ವ್ಯಕ್ತಿ ದೇವರಾದರೆ ಇನ್ನೊಬ್ಬರಿಗೆ ಪ್ರಕೃತಿ ದೇವರು, ಕಾನೂನು ದೇವರಾಗಬಹುದು ಇನ್ನೊಬ್ಬರಿಗೆ ಚಿಂತನೆ ದೇವರಾಗಬಹುದು.. ವ್ಯಕ್ತಿ ಪೂಜೆಯನ್ನು ಯಾವ ಸಂಘಟನೆಯ ತತ್ವವು ಒಳಗೊಂಡಿಲ್ಲ. ಸ್ವತಃ ಬಸವಣ್ಣನವರು ವಿರೋದಿಸಿದರು ಆದರೂ ಅವರನ್ನೆ ಪೂಜಿಸಿದರು, ಆಚರಣೆಯ ಮೌಢ್ಯವನ್ನು ವಿರೋಧಿಸಿದರು ಆ ವಿರೋಧದ ಲಾಭದಲ್ಲಿ ಅನುಯಾಯಿಗಳು ಇನ್ನೊಂದು ಮೌಢ್ಯ ಸೃಷ್ಟಿಸಿದರು. ಹೀಗೆ ನಾವೆಲ್ಲರೂ ಇಟ್ಟುಕೊಂಡಿರುವ ಆದರ್ಶ, ನಂಬಿಕೆ, ವಿಚಾರಗಳನ್ನು ನಮ್ಮ ಅಂತರ್ಯದಲ್ಲಿ ಇಟ್ಟುಕೊಳ್ಳದೆ ಹೃದಯದಲ್ಲಿ ಪೂಜಿಸದೆ ಸಾಂಸ್ಥಿಕವಾಗಿ ಹೊರಗಡೆ ಎಸೆದು ಗಲೀಜು ಮಾಡಿ, ದ್ವೇಷದಿಂದ ಇನ್ನೊಬ್ಬರು ಒಪ್ಪಿಕೊಳ್ಳಲೆಬೇಕು ಎಂಬ ಹಠದಲ್ಲಿದ್ದೇವೆ. ನಾನು ನನ್ನನ್ನೆ ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಡುವುದರ ಬದಲು ಇನ್ನೊಬ್ಬನಿಗೆ ನನ್ನ ಒಪ್ಪಿತ ಎಲ್ಲವನ್ನು ಹೇರುವ ಅಧಿಕಾರ ನನಗಾರು ನೀಡಿದರು ಎನ್ನುವುದೇ ತಿಳಿದಿಲ್ಲ. ಆದರೊ ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ನನ್ನ ಆಯ್ಕೆಯ ಮಿತಿ ಸಂವಿಧಾನದ ಅಶಯವನ್ನು ಮೀರಿದಾಗ ಜೆ ಜೆ ರೂಸೋ ನ ಜನತಾ ಪರಮಾಧಿಕಾರದಂತೆ ಬಹುತ್ವದ ನೆಲೆಯಲ್ಲಿ ಕಾನೂನಿನ ಮೂಲಕ ನಿಯಂತ್ರಿಸಬಹುದು. ಆದರೆ ಜೆ ಎಸ್ ಮಿಲ್ ನ ಒಬ್ಬ ವ್ಯಕ್ತಿಯ ಆಶಯವನ್ನು ಮರೆಯುವಂತಿಲ್ಲ. ಕೃಷ್ಣ ಹೇಳುತ್ತಾನೆ "ನಿನ್ನನ್ನು ನಿಯಂತ್ರಿಸಬಲ್ಲೆ ಆದರೆ ನೀನು ಕೋಪ ಹಾಗೂ ಅಹಂಕಾರ ಭರಿತನಾದಾಗ ಸಾಧ್ಯವಿಲ್ಲ. ನೀನು ನನ್ನನ್ನು ಮರೆತಿರುವೆ." ಎಲ್ಲವನ್ನೂ ಪ್ರೀತಿಸುವ ಗುಣ ಎಲ್ಲರನ್ನು ಒಳಗೊಳ್ಳುವ ಗುಣ ಅಪರೂಪ. ಅವರು ಅರ್ಥ ಮಾಡದಿದ್ದರೆ ವಿವರಿಸಿ ಹೇಳುವುದು ಉತ್ತಮ.ಅವರು ಅರಿತು ತರ್ಕ ಬದ್ಧವಾಗಿ ವಿಚಾರ ಮಂಡಿಸುವಾಗ ಕೇಳಿದ ನಂತರ, ಮತ್ತೂ ತಮ್ಮ ವಿಚಾರ ಹೇಳಬೇಕು ಅನಿಸಿದರೆ, ಹೀಗೂ ಇರಬಹುದಲ್ಲವೆ ಯೋಚಿಸಿ ಎಂದು ತೆರಳುವುದು ಒಳಿತು. ಒಟ್ಟಿನಲ್ಲಿ ಇನ್ನೊಬ್ಬರನ್ನು ನೀನು ಹೀಗೆ ಮಾಡು ಎಂದು ಹೇಳುವ ವ್ಯಕ್ತಿ ತನ್ನ ಅಸ್ತಿತ್ವ ಗಟ್ಟಿ ಇದೆಯಾ ನೋಡಬೇಕು. ಬದಲಾಯಿಸುತ್ತೇನೆ, ಹಿಂಸೆ ಮಾಡುತ್ತೇನೆ , ನನ್ನ ನಂಬಿಕೆ ಶ್ರೇಷ್ಠ ಎಂದವರಾರು ಇವತ್ತಿಗೂ ಶಾಶ್ವತವಾಗಿ ಈ ಜಗತ್ತಿನಲ್ಲಿ ಉಸಿರಾಡುತ್ತಿಲ್ಲ. ಸಮಯ ಬಂದಾಗ ಎಲ್ಲಿ ಯಾರೂ, ಯಾವಾಗ ಹೋಗಬೇಕು, ಎಲ್ಲಿಗೆ ಹೋಗುತ್ತೇವೆ ಎಂಬುದು ಯಾರಿಗೂ ಗೊತ್ತಿಲ್ಲ.
-ಪೃಥ್ವಿರಾಜ್ ಗಂಗೋತ್ರಿ