ಮಂಗಳವಾರ, ನವೆಂಬರ್ 13, 2012

ಸ್ವಾಭಿಮಾನ ಬದುಕಿಗೊಂದು ಪ್ರಶ್ನೆ....

                                                     ಸೂರ್ಯನ ಹೊಂಗಿರಣದ ತಾಪ ತಡೆಯುವಂತಿತ್ತು ಮುಖಕ್ಕೆ ಬಟ್ಟೆ ಹಿಡಿದ ರೀತಿ. ಕೋಣಾಜೆ ಪರಿಸರದ ಸುತ್ತ ಪ್ರದಕ್ಷಿಣೆಯೋ , ಅಪ್ರದಕ್ಷಿಣೆಯೋ ಗೊತ್ತಿಲ್ಲ! ಸುಮಾರು ಅರವತ್ತರ ಹರೆಯದ ಈ ಅಜ್ಜನ ನೀವು ಕಂಡಿರಬಹುದು, ಇಲ್ಲ ಇನ್ನು ಮುಂದೆ ಇಲ್ಲಿ ಬಂದಾಗ ಕಾಣಬಹುದು. ನಾಮ ದೇವಪ್ಪ , ಕುಸಿದ ಮನೆಯಲ್ಲಿ ನಿತ್ಯ ರಾತ್ರಿ ಚಂದ್ರ-ನಕ್ಷತ್ರಗಳೊಡನೆ ಒಡನಾಟ. ಕಾಲೇಜಿನ ಪರಿಸರದಲ್ಲಿ ಮೊದಲ ಬಾರಿ ಸಂಚರಿಸಿದಾಗ ಆ ಮುಖ ಕಂಡಿದ್ದೆ. ಈಗ ನನ್ನ ವಸತಿ ಇರುವುದೇ ಈ ವ್ಯಕ್ತಿಯ ಸನ್ನಿಧಾನದ ಬಳಿ .
             ದೂರದಲ್ಲೊಂದು ಹಲಸಿನ ಮರ. ಅದಕ್ಕೆ ಹೊಂದಿಕೊಂಡು ಕುಸಿದು ಬಿದ್ದ ಮನೆ. ಮೂಲತ: ನಾವಿರುವ ಪರಿಸರ ಈತನ ಕುಟುಂಬಕ್ಕೆ ಸೇರಿದ್ದು. ಆದರೆ ಅವನ ಅಣ್ಣಂದಿರು ಯಾರಿಗೋ ಮಾರಿದ್ದರು. ಪಕ್ಕದ ಮನೆಯ ಅಕ್ಕನಿಂದ ಹಿಡಿದು ಅನೇಕರಲ್ಲಿ ವಿಚಾರಿಸಿದ್ದೆ. ಕುತೂಹಲ ಹೆಚ್ಚಿದಂತೆ ಅಂತೆ ಕಂತೆಗಳ ಜಾಡು ನನ್ನನ್ನು ಸುತ್ತುವರಿದಿತ್ತು.
             ಜಪ ಮಾಡುವಂತೆ ರಾತ್ರಿ ಗೊಣಗುವ ಈ ವ್ಯಕ್ತಿ ಡಿಗ್ರಿ ಮುಗಿಸಿ, ಬ್ಯಾಂಕಿನ ಉದ್ಯೋಗದಲ್ಲಿದ್ರಂತೆ. 1970ರ ಸುಮಾರಿಗೆ ಲವ್ ಪರೀಕ್ಷೆಯಲ್ಲಿ ಅನುತ್ತಿರ್ಣರಾಗಿ ಮದ್ಯ ಪ್ರಿಯರಾದರು. ಈಗ  ಮಾನಸಿಕ ಸ್ಥಿಮಿತ ಕಳೆದುಕೊಂಡಿರುವಂತೆ ವರ್ತಿಸುತ್ತಾರೆ. ಒಟ್ಟಿನಲ್ಲಿ ಇದು ಅವರ ಬದುಕ ಕತೆ. ಅವರನ್ನೇ ವಿಚಾರಿಸಿದರೆ ಸರಸರನೆ ಹೆಜ್ಜೆಯ ವೇಗ ಜಾಸ್ತಿ ಮಾಡುತ್ತಾರೆ. ಇವರ ಬದುಕಿನ ಕತೆಗಾಗಿ ಇವರು ಮುಖ್ಯ ಅಂತ ನಾನು ಭಾವಿಸಿಲ್ಲ. ಅವರ ಜೀವನ ಮತ್ತು ಬದುಕೋ ಶೈಲಿ ಕಂಡ ನಾನು 'ಸ್ವಾಭಿಮಾನ'ಕ್ಕೆ ಇವರ ಬದುಕು ಅರ್ಥಪೂರ್ಣ  ಅಗಬಹುದು ಎಂದುಕೊಂಡಿದ್ದೇನೆ.
             ದೇಶ, ಕೋಶ, ಈಶನಿಲ್ಲದ ಈ ಬದುಕಿನಲ್ಲಿ ಸ್ವಾಭಿಮಾನ ಕಾಣುತ್ತಿದೆ. 'ಬಾಂಬೆಗೆ ಉಗ್ರವಾದಿಗಳ ದಾಳಿ ಆಯಿತು' ಎಂಬ ಸ್ನೇಹಿತನ ವಾರ್ತೆ ಕುತೂಹಲ ಭರಿಸಲಿಲ್ಲ. ಆಕಾಶ ನೋಡಿ ನಗುವ ಈ ವ್ಯಕ್ತಿ ಗೋಡೆ ಕುಸಿಯುವ ಭೀತಿಯಿಲ್ಲದೆ  ನಿಶ್ಚಿಂತೆಯಿಂದ ಮಲಗಿದ್ದು ಕುತೂಹಲ ಭರಿಸಿತು. ನೂರಾರು ರಾಜಕಾರಣಿಗಳು, ಶ್ರೀಮಂತ ಹೋಟೆಲ್ ಉದ್ಯಮಿಗಳು ದೇಶದ ಪ್ರತಿಷ್ಠೆಯಾದರೆ  ಹೊರತು ಹವಾರು ಕಟ್ಟಡಗಳು ಕುಸಿದು ಬಿದ್ದು, ಮಾರುಕಟ್ಟೆ ಸ್ಪೋಟಗೊಂಡು ರಕ್ತ ಹರಿದಾಗ ಬಡಜೀವಗಳನ್ನು ಸಂತೈಸುವ ಕೈಗಳಿರಲಿಲ್ಲ.
             ಅದು ಏನೇ  ಇರಲಿ , ಈ ವ್ಯಕ್ತಿ ಮಾತ್ರ ರಾತ್ರಿ ತೀರ್ಥಪಾನ, ಬೆಳಿಗ್ಗೆ ಜಲಸ್ನಾನ, ಹಗಲೊತ್ತು ಕೆಲವೆಡೆ ಕೆಲಸ ನಿರ್ವಹಿಸಿ ಜೀವನದ ಖರ್ಚಿಗೆ ಹಣ ಸಂಪಾದನೆ. ಮುಂಜಾನೆ ಹಾಗು ಸಂಜೆಯ ವೇಳೆ ಬಯಲ ಹೋಮಕುಂಡದಲ್ಲಿ ತನಗೆ ಬೇಕಾದ ಅಡುಗೆ. ಹರಿದ ಬಟ್ಟೆಯನು ಶುಭ್ರವಾಗಿಸಿ ದಿನನಿತ್ಯ ಒಗೆಯುವ ಪರಿಪಾಠ. ರೋಗ ರುಜಿನ ಇಲ್ಲದ ಈ ಬದುಕು ಹೇಗೆ ಸಾದ್ಯ ಎಂಬ ಪ್ರಶ್ನೆ ಹಾಗೆ ಉಳಿದಿದೆ. ಯಾರಿಂದಲೋ ಹಣ ಪಡೆದದ್ದು  ನನಗೆ ಗೊತ್ತಿಲ್ಲ. ಆದರೆ ನಾನು ಹಣ ಕೊಟ್ಟಾಗ ತಗೊಂಡವರು ಅಲ್ಲ. ಇದನೆಲ್ಲ ನೋಡಿ ನನಗನಿಸಿತ್ತು ಸ್ವಾಭಿಮಾನದ ಬದುಕಿಗೆ ಈ ವ್ಯಕ್ತಿ ಯಾಕೆ ಮಾದರಿ ಯಾಗಬಾರದು?
     ಸಮ್ಮಾನ ಅವಮಾನದ 
     ಕಲ್ಮಶವ ಹುದುಗಿಟ್ಟ 
     ಕಸದ ತೊಟ್ಟಿಯಾಗಿಸಿದೆ 
     ಈ ಮನವನು 
     ಅಂತರ್ಯದ ಸತ್ಯವನು 
     ಬಹಿರಂಗ ಬಿಚ್ಚಿಡದೆ 
     ಮುಚ್ಚಿರದ ಎದೆಯಲ್ಲಿ 
     ಕಂಡೆ ಸ್ವಾಭಿಮಾನವನು 

*******************************************************************************


ಇದು  2009 ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿರುವಾಗ ಬರೆದ ಕಿರು ಬರವಣಿಗೆ.
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ